Subscribe and Stay UptoDate

Enter your email address:

Delivered by Subscribe and stay upto date

Saturday, July 11, 2009

ಕನ್ನಡ ಸಂಘಟನೆಗಳ ಕೆಲಸವೇನು ? - kannada organizations work

ಕನ್ನಡದ ಹೆಸರಿನಲ್ಲಿ ಹಲವು ವೇದಿಕೆಗಳಿವೆ. ಈ ಎಲ್ಲವುಗಳ ಉದ್ದೇಶ ಒಂದೇ ಅದು ಕನ್ನಡ ಪರ ಕೆಲಸ ಮಾಡುವುದು. ಆದರೆ ಇತ್ತೀಚಿನ ದಿನಗಳಲ್ಲಿ ಅವುಗಳ ಕಾರ್ಯವೈಖರಿಯನ್ನು ನೋಡಿದರೆ ತಮ್ಮ ಉದ್ದೇಶ ಮರೆತು ಕೇವಲ ಸ್ವಹಿತಾಸಕ್ತಿ ಮತ್ತು ಪ್ರಚಾರಕ್ಕಾಗಿ ಕೆಲಸ ಮಾಡುತ್ತಿರುವುದು ಸ್ಪಷ್ಟವಾಗುತ್ತಿದೆ.
ಹಿಂದಿನ ದಿನಗಳಲ್ಲಿ ಕನ್ನಡ ಪರ ಸಂಘಟನೆಗಳೆಂದರೆ ಅವುಗಳಿಗೆ ಒಂದು ಮಾನ್ಯತೆ ಮತ್ತು ಗೌರವ ಇರುತ್ತಿತ್ತು ಕಾರಣ ಅವುಗಳು ತಮ್ಮದೇ ಆದ ನೀತಿ ನಿಯಮ ಹಾಗು ಬದ್ದತೆಗಳಿಗೆ ಒಳಪಟ್ಟು ನೈಜ ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿದ್ದವು. ಆದರೆ ಈಗಿನ ಸಂಘಟನೆಗಳು ಕೇವಲ ಪ್ರಚಾರಕ್ಕಾಗಿ ಕೆಲಸ ನಿರ್ವಹಿಸುತ್ತಿವೆ ಎಂಬುದಕ್ಕೆ ಇತ್ತೀಚೆಗೆ ರೈಲ್ವೆ ಇಲಾಖೆ ಪರೀಕ್ಷೆ ಎಂದುಕೊಂಡು ಕೆ ಪಿ ಎಸ್ ಸಿ ಪರೀಕ್ಷೆ ಮೇಲೆ ದಾಳಿ ಮಾಡಿರುವುದು ತಾಜಾ ಉದಾಹರಣೆ.
ತಾವು ಮಾಡುವ ಎಲ್ಲ ಕೆಲಸಗಳ ಬಗ್ಗೆ ಮುಂಚಿತವಾಗಿ ಮಾದ್ಯಮಗಳಿಗೆ ತಿಳಿಸಿಕೊಂಡು ಮಾಡುವ ಇಂತಹ ಸಂಘಟನೆಗಳಿಂದ ಯಾವುದೇ ರೀತಿಯಲ್ಲೂ ಕನ್ನಡದ ಅಭಿವೃದ್ಧಿ ಸಾದ್ಯವಿಲ್ಲ ಎಂದರೆ ಒಪ್ಪಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟ ಆಗಬಹುದು. ಆದರೆ ಇದು ಸತ್ಯಕ್ಕೆ ಸಮೀಪ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾದ ಅನಿವಾರ್ಯತೆಯನ್ನು ನೆನಪಿಸುವುದಕ್ಕೆ ನಾನು ಮರೆಯಲಾರೆ.
ಕನ್ನಡಕ್ಕೆ ಏನಾದರು ಕಂಟಕ ಮತ್ತು ತೊಂದರೆ ಬಂದ ಸಂದರ್ಭದಲ್ಲಿ ಹೋರಾಟ ಮಾಡುವ ಮತ್ತು ಸಂದರ್ಭ ಬಂದರೆ ದಾಳಿ ಪ್ರತಿಭಟನೆಗಳನ್ನು ಮಾಡುವುದು ತಪ್ಪಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದಕ್ಕ್ಕೆ ಅವಕಾಶ ಕೂಡ ಕಾನೂನಿನ ಪರಿಮಿತಿಯಲ್ಲಿ ಇದೆ. ಆದರೆ ಅದನ್ನು ಮೀರಿ ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಕಾನೂನಿಗೆ ವಿರುದ್ಧವಾಗಿ ನಡೆಯುವ ಚಟುವಟಿಕೆಯನ್ನು ಯಾವುದೇ ಕನ್ನಡ ಅಭಿಮಾನಿಗಳು ಒಪ್ಪಿಕೊಳ್ಳಬಾರದು. ನಿಯಮ ಬದ್ಧವಾಗಿ ಇಂದು ಯಾವುದು ನಡೆಯುವುದಿಲ್ಲ ಸರಿ ಆದರೆ ಹಾಗೆಂದ ಮಾತ್ರಕ್ಕೆ ಉದ್ದೇಶಪೂರ್ವಕವಾಗಿಯೇ ಕೆಲಸ ನಿರ್ವಹಿಸುವ, ಆ ಮೂಲಕ ತಮ್ಮನ್ನು ತಾವು ಬೆಳೆಸಿಕೊಳ್ಳಲು ಯತ್ನಿಸುವ ಕೀಳು ಮನೋಧರ್ಮವನ್ನು ನಿಯಂತ್ರಿಸಲು ಯಾರಿಂದಲೂ ಸಾದ್ಯವಿಲ್ಲ ಎಂಬುದು ನನಗೆ ಗೊತ್ತು. ಆದರೆ ಇದಕ್ಕೆ ಸ್ವಯಂ ನಿಯಂತ್ರಣ ಒಂದೇ ಪರಿಹಾರ ಎಂಬುದನ್ನು ತಿಳಿದುಕೊಳ್ಳಬೇಕದಾವರ ಸಂಖ್ಯೆ ಹೆಚ್ಚಾಗಬೇಕಿದೆ.
ಪ್ರತಿಭಟನೆ, ಧರಣಿ, ದಾಳಿ, ಮುಷ್ಕರ ಇತ್ಯಾದಿ ಹೋರಾಟಗಳಿಗೆ ಅರ್ಥವೇ ಇಲ್ಲದಂತಾಗಿ ಅಧಿಕಾರದ ಗದ್ದುಗೆಯಲ್ಲಿ ಇರುವವರು ಇವುಗಳನ್ನು ತೀರ ಲಘುವಾಗಿ ಪರಿಗಣಿಸುತ್ತಿದ್ದಾರೆ. ನಮ್ಮ ಹೋರಾಟಗಳಿಗೆ ಬೆಲೆಯೇ ಇಲ್ಲದಂತಾಗಿದೆ ಎಂದರೆ ಅದಕ್ಕೆ ಕಾರಣ ಹೋರಾಟಗಳಲ್ಲಿ ರಾರಾಜಿಸುತ್ತಿರುವ ಸ್ವಹಿತಾಸಕ್ತಿ. ಮಾದ್ಯಮದ ಕ್ಯಾಮರ ನೋಡುತ್ತಾ ದಿಕ್ಕಾರ ಕೂಗುವ ಆ ಭಂಗಿ ಸರ್ವೇ ಸಾಮಾನ್ಯವಾಗಿದೆ. ಒಮ್ಮೊಮ್ಮೆ ನೋಡಿದರೆ ಪತ್ರಿಕೆಗಳಾಗಲಿ ಅಥವಾ ದೃಶ್ಯ ಮಾಧ್ಯಮವಾಗಲಿ ತಮ್ಮಲ್ಲಿ ಈ ಹಿಂದೆ ಇದ್ದ ದ್ರುಷ್ಯವನ್ನೋ ಅಥವಾ ಚಿತ್ರವನ್ನೋ ಪ್ರಕಟಿಸಿದರೂ ಆ ವ್ಯತ್ಯಾಸ ಗೊತ್ತಾಗದಿದ್ದರೆ ಆಶ್ಚರ್ಯವೇನಿಲ್ಲ . ಕಾರಣ ನಾನು ಮೇಲೆ ಹೇಳಿದ ಎಲ್ಲ ಹೋರಾಟಗಳಿಗೆ ನಿಗದಿತ 'ಫಾರ್ ಮೆಟ್ ' ರೂಪಿಸಿಕೊಂಡಂತಿದೆ. ಹಿಂದಿನ ಕಾಲದಲ್ಲಿ ಒಂದು ಪ್ರತಿಭಟನೆಯಾಗಲಿ, ಹೋರಾಟವಾಗಲಿ ನಡೆದರೆ ಆ ಬಗ್ಗೆ ಇಡೀ ರಾಜ್ಯಾದ್ಯಂತ ಚರ್ಚೆಯಾಗುತ್ತಿತ್ತು . ಆದರೆ ಇಂದು ಯಾವುದೊ ಒಂದು ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ರಸ್ತೆಯಲ್ಲಿ ಹೋಗುತ್ತಿದ್ದವರು ತಿರುಗಿಯೂ ನೋಡದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇದಕ್ಕೆ ಕಾರಣ ಯಾವುದೇ ಸಂಘಟನೆಗಳಾಗಲಿ ಹಮ್ಮಿಕೊಳ್ಳುವ ಹೋರಾಟಕ್ಕೆ ಗೊತ್ತು ಗುರಿ ಇಲ್ಲದಿರುವುದು. ಕನ್ನಡ ಸಂಘಟನೆಗಳಂತೂ ಹೆಗಲ ಮೇಲೆ ಕೆಂಪು-ಹಳದಿ ಶಾಲು ಹಾಕಿಕೊಂಡು ಹಗಲು ಗುಂಡಾಗಿರಿ ಮಾಡುತ್ತಿವೆಯೇನೋ ಎಂಬಂತೆ ಭಾಸವಾಗುತ್ತಿದೆ. ಅದೊಂದು ಪವಿತ್ರ ಲಾಂಛನ, ಅದನ್ನು ಕಂಡ ಕೂಡಲೇ ಎಲ್ಲರಿಗೂ ಭಕ್ತಿ, ಗೌರವ ಬರಬೇಕು. ಆದರೆ ಆ ರೀತಿ ಕೆಂಪು-ಹಳದಿ ಶಾಲು ಹಾಕಿಕೊಂಡವರನ್ನು ಕಂಡರೆ ಭಯ ಮತ್ತು ಅವರನ್ನು ತೀರ ಲಘುವಾಗಿ ಕಾಣುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ರೈಲ್ವೆ ಇಲಾಖೆ ಪರೀಕ್ಷೆ ಎಂದುಕೊಂಡು ಕೆ ಪಿ ಎಸ್ ಸಿ ಪರೀಕ್ಷೆ ಮೇಲೆ ದಾಳಿ ಮಾಡಿ ಇಡೀ ರಾಜ್ಯದ ಜನತೆಯು ಇವರ ಮೇಲೆ ಮುನಿಸಿಕೊಳ್ಳುವಂತೆ ವರ್ತಿಸಿದ್ದ ಒಂದು ಕನ್ನಡ ಸಂಘಟನೆಯ ಕಾರ್ಯಕರ್ತನೊಬ್ಬನ ದಾಳಿಯ ಪರಿಯನ್ನು ಕಂಡು ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಭಯದಿಂದ ಚೀರುತ್ತಾ ಗಾಭರಿಗೊಂಡ ಚಿತ್ರವು ಪ್ರಮುಖ ದಿನಪತ್ರಿಕೆಯೊಂದರಲ್ಲಿ ಪ್ರಕಟ ಗೊಂಡಿತ್ತು. ಆ ಚಿತ್ರವನ್ನು ನೋಡಿದರೆ ತಿಳಿಯುತ್ತದೆ ಆ ಕನ್ನಡ ಸಂಘಟನೆ ಕಾರ್ಯಕರ್ತನ ದಾಳಿಯ ಕ್ರೂರತೆ.
ಈ ರೀತಿಯಿಂದ ಕನ್ನಡಿಗರಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಇವರಿಗೆ ಸಾದ್ಯವೇ ? ಇಂಥವರಿಂದ ಕನ್ನಡಿಗರು ರಕ್ಷಣೆ, ಬೆಂಬಲ ನಿರೀಕ್ಷಿಸಿದರೆ ಅದಕ್ಕಿಂತ ಆಭಾಸ ಮತ್ತೊಂದಿಲ್ಲ, ಇವರು ಕೇವಲ ತಮ್ಮ ಹಗಲು ಗುಂಡಾಗಿರಿಗೆ ಕನ್ನಡದ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಜನ ಇವರನ್ನು ತಿರಸ್ಕರಿಸುವ ಮೊದಲು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕು.
ಮತ್ತೊಂದು ದುರಂತವೆಂದರೆ ಮಾಧ್ಯಮಗಳು ಈ ದಾಳಿ ಪ್ರಕರಣವನ್ನು ಯಥಾವತ್ತಾಗಿ ವರದಿ ಮಾಡಿದ್ದು ಬಿಟ್ಟರೆ ಕಾರ್ಯಕರ್ತರ ಗುಂಡಾ ರೀತೀಯ ವರ್ತನೆಯನ್ನು ಖಂಡಿಸುವುದಾಗಲಿ ಆ ಬಗ್ಗೆ ವಿಮರ್ಶಿಸಲೇ ಇಲ್ಲ. ಇದರಿಂದ ಅವರಿಗೆ ತಮ್ಮ ತಪ್ಪಿನ ಅರಿವಾಗುವುದಾದರೂ ಹೇಗೆ ಎಂಬ ಪ್ರಶ್ನೆ ಸಾಮಾನ್ಯರಲ್ಲಿ ಮೂಡದಿರದು.
ಜೊತೆಗೆ ಕನ್ನಡದ ಹೆಸರಲ್ಲಿರುವ ಸಂಘಟನೆಗಳಲ್ಲೇ ಭಿನ್ನಾಭಿಪ್ರಾಯ, ಅವುಗಳಲ್ಲೇ ಸ್ಪರ್ದೆ, ಪರಸ್ಪರ ಪರ ವಿರೋಧದ ಹೋರಾಟ ಒಟ್ಟಾರೆ ಜನರಿಗೆ ಇವುಗಳ ಮೇಲೆ ಬೇಸರ ಮೂಡಿಸುವ ವರ್ತನೆಗಳು. ಇವರು ಯಾವಾಗ ಸುದಾರಿಸುವರೋ ಆ ಕನ್ನಡ ದೇವಿ ಭುವನೇಶ್ವರಿಗೆ ಗೊತ್ತು. ಕನ್ನಡ ಸಂಘಟನೆಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಲಿ ಎಂಬ ಹಿನ್ನೆಲೆಯೊಂದೆ ಈ ಲೇಖನದ ಉದ್ದೇಶ.

No comments: