Subscribe and Stay UptoDate

Enter your email address:

Delivered by Subscribe and stay upto date

Friday, January 1, 2010

ತರುಣ ಸಾಗರ ಜೈನಮುನಿ : Tarunasagara jainamuni

ತರುಣ ಸಾಗರ ಮುನಿವರ


ಕಟು ಪ್ರವಚನದ ಸಾಗರ


ಅಹಿಂಸಾ ತತ್ವದ ಆಗರ


ಪಾಲಿಸು ಎಲ್ಲರ ಅನವರ !!


ನೀಡುವಿರೆಲ್ಲೆಡೆ ಪ್ರವಚನ


ಗೆದ್ದಿರಿ ರಾಜ್ಯದ ಜನಮನ


ಕಾಲ್ನಡಿಗೆಯಲ್ಲೇ ನಿಮ್ಮ ಪಯಣ


ನಿರ್ವಾಣ ಮೂರ್ತಿ ನಿಜಶರಣ !!


ಕೇಳಿದರೊಮ್ಮೆ ನಿಮ್ಮ ನುಡಿ


ಕಳಚಿ ಹೋಗುವುದು ಗೊಡ್ಡು ಮಡಿ


ದುಶ್ಚಟಗಳನ್ನು ಮಾಯ ಮಾಡಿ


ಶರಣಾಗುವನು ನಿಮಗೆ ನಡೆದಾಡುವ ಗುಡಿ !!


ದಿಗಂಬರ ರೂಪದ ಧೀನಬಂಧು


ಆದರು ಕರೆವರು ಮಹಾರಾಜ ಎಂದು


ಮಾನವ ರೂಪದ ಮಹಾನ್ ಚೇತನ


ನಿಮಗಿದೋ ನನ್ನ ನುಡಿನಮನ !!




Saturday, December 12, 2009

ಕನ್ನಡ : kannada present poem

ಕನ್ನಡ ಕಹಳೆಯ ಊದಿದ ಕಲಿಗಳು


ಹಲವರು ಜಗದೊಳಗೆ !


ಓದಿದ ನಾದವ ಕೇಳಿಸಿಕೊಂಡರು


ಕೆಲವರು ಧರೆಯೊಳಗೆ !!



ಕನ್ನಡದವರೇ ಕನ್ನಡ ಮರೆತರು


ತಮ್ಮ ಮನೆಯೊಳಗೆ !


ಕನ್ನಡವೆಂದರೆ ಮುತಿ ಮುರಿಯುವರು


ತಮ್ಮ ಮನದೊಳಗೆ !!



ಕಲಿಯಲು ಸುಲಭ ಕನ್ನಡ ಭಾಷೆಯು


ಮರೆಯುವೆ ನೀ ಏಕೆ ?


ಮರೆಯುವ ಮುನ್ನ ಆಲೋಚಿಸು ಚಿನ್ನ


ಮರೆಯುವ ಮನಸೇಕೆ ?



ಕನ್ನಡ ಕಂಪನು ಇಂಪುಗೊಳಿಸಿದರು


ರಾಷ್ಟ್ರಕವಿ ಕುವೆಂಪು !


ಗಂಡು ಭಾಷೆಯಲಿ ಕನ್ನಡ ಕೊರೆದರು


ವರಕವಿ ದರಾ ಬೇಂದ್ರೆ !!



ಹಲವರ ಕೊಡುಗೆ ಸಂದಿದೆ ಭಾಷೆಗೆ


ಬೆಳೆಸುವ ಮನವಿಲ್ಲ !


ಭಾಷಾಭಿಮಾನವಿಲ್ಲದ ದ್ರೋಹಿಯೇ


ನಿನಗಿಲ್ಲಿ ಸ್ಥಳವಿಲ್ಲ !!



ಕಟ್ಟ ಕಡೆಗೊಂದು ಮಾತ ಹೇಳುವೆನು


ಕೇಳಿರಿ ಕಿವಿಗೊಟ್ಟು !


ನಿತ್ಯ ಸತ್ಯವಿದು ಆದಿ ಅನಂತ


ಕನ್ನಡ ತಾಯಿಯ ಹುಟ್ಟು !!


( ತಾಯಿ ಕನ್ನಡಮ್ಮನ ಕುರಿತು ೨೦೦೭ ರಲ್ಲಿ ಕವನಗಳ ಸ್ಪರ್ದೆಯೊಂದಕ್ಕೆ ಕಳುಹಿಸಲು ಬರೆದ ಪದ್ಯ )

Sunday, December 6, 2009

khan malleshwara vachana

ದ್ವೇಷವಿಲ್ಲದ ತಂದೆ, ಸ್ವಾರ್ಥವಿಲ್ಲದ ತಾಯಿ

ಅಸೂಯೆ ಇಲ್ಲದ ಗುರು, ಪಲಾಪೇಕ್ಷೆ ಇಲ್ಲದ ಸ್ನೇಹಿತ

ಅನುಮಾನವಿಲ್ಲದ ಪತ್ನಿ ಈ ಐದು ಪಂಚ ರತ್ನಗಳು

ಜಗದ ಜನರಿಗೆ ಇದ ಕೊಟ್ಟು ಕರುಣಿಸಯ್ಯ ತಂದೆ

ಕಾನ್ ಮಲ್ಲೇಶ್ವರ !!

(ವೈಯಕ್ತಿಕವಾಗಿ ಮೇಲಿನ ಸಂಬಂಧದ ಗೊಂದಲ ಉಂಟಾದ ಸಂದರ್ಭದಲ್ಲಿ ಬರೆದ ವಚನ)

Friday, November 20, 2009

khan malleshwara vachana

ಮುತ್ತಿನಂತ ಮನಸು ನಿಂದು, ಮುತ್ತಿನಂತೆ ಬಾಳಿದೆ

ಅತ್ತೆಯಂತೆ ಕಾಣಲಿಲ್ಲ, ಹೆತ್ತ ತಾಯಿಯಂತೆ ಸಾಗಿದೆ

ಅತ್ತು ಕರೆದು ಹೋಗಲಿಲ್ಲ, ಸತ್ತು ಸ್ವರ್ಗ ಸೇರಿದೆ

ಪತಿಯ ಕರೆಗೆ ಬೂಬಳಾಗಿ, ಸ್ಥಳೀಯರಿಗೆ ಬೂಬಮ್ಮಳಾಗಿ

ಜಗದ ಯಾತ್ರೆ ಮುಗಿಸಿದೆ, ಶರಣೆ ಪದವಿಗೇರಿದೆ

ಕಾನ್ ಮಲ್ಲೇಶನ ಕಾಣಲೆಂದು, ನಮಗೂ ಹೇಳದೆ ಓಡಿದೆ !!

{ಹುಣ್ಸಮಕ್ಕಿ ಅಕ್ಕನ ಅತ್ತೆ (ಅಮ್ಮ) ಲಿಂಗೈಕ್ಯ ರಾದ ನಂತರ ಅವರ ಶಿವಗಣಾರಾಧನೆ ಪತ್ರಿಕೆ ಮಾಡಿಸುವಾಗ ಅವರ ಕುರಿತು ಬರೆದ ವಚನ}

Thursday, November 5, 2009

khan malleshwara vachana

ಅಬ್ಬರಿಸಿ ಬಂದಿದೆ ನೆರೆ, ತಬ್ಬಿಬ್ಬಾದರು ಜನರು

ಎಲ್ಲಿ ಹೋಯ್ತು ಆಡಳಿತ ಯಂತ್ರ ?

ಮಂತ್ರಿಗಳಿಗೆ ಕುರ್ಚಿ ಚಿಂತೆ,

ಅಧಿಕಾರಿಗಳಿಗೆ ವರ್ಗಾವಣೆಯಂತೆ,

ಶಾಸಕರಿಗಿದೇ ಸುಗ್ಗಿಯ ಸಂತೆ,

ಜನರ ಬಾಯಲ್ಲಿ ಬರಿ ಅಂತೆ - ಕಂತೆ

ಮಾಧ್ಯಮಗಳಿಗಂತೂ ಬಿಡುವಿಲ್ಲವಂತೆ

ಕಾನ್ ಮಲ್ಲೇಶ್ವರ ಸಂತ್ರಸ್ಥರಿಗೆ ನೀನೆ ಪರಿಹಾರವಂತೆ

(ಅಕ್ಟೋಬರ್ ೩೦ &೩೧ ರಂದು ಶಿವಮೊಗ್ಗದಲ್ಲಿ ನಡೆದ ೨ ದಿನಗಳ ಜಿಲ್ಲ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಕೂಡಲೇ ಬರೆದು ವಾಚಿಸಿದ ವಚನ)

Sunday, August 16, 2009

ಉಸಿರು ನಿಂತಿದೆಯಷ್ಟೇ .... Usiru nintideyashte

ಎಲ್ಲಿ ಮರೆಯಾದೆ ಗೆಳೆಯ ?

ಸಾಕಾಯ್ತ ಈ ಜಗದ ಪಯಣ

ಮರೆತೋಯ್ತಾ ನಮ್ಮಗಳ ಸ್ನೇಹ

ತೀರಿತೆ ನಿನ್ನ ಬದುಕಿನ ದಾಹ !!

ನೊಂದವರಿಗೆ ನೀ ನೀಡುತ್ತಿದ್ದ ಸಾಂತ್ವನ

ನಿನ್ನ ಅಗಲಿಕೆ ನಮಗೆ ನಂಬಲಾರದ ಕಂಪನ

ಈ ಭುವಿಗೆ ಮತ್ತೆಂದು ನಿನ್ನ ಆಹ್ವಾನ

ಓ ದೇವರೇ ಹಿಂದಿರುಗಿಸು ನಮ್ಮ ಸ್ನೇಹಿತನ !!

ಮರೆಯಾಗಿ ಮನದಲ್ಲಿ ನೆಲೆಯಾದ ಬಾಬು

ನಿತ್ಯ ನಸುಕಿನಲಿ ಹುಟ್ಟಿ ಬರುವೆಯಾ ರಘು

ನಿನ್ನ ಸ್ನೇಹಿತರು ನಾವು ಮತ್ತದೇ ಪ್ರಶ್ನೆ

ಎಲ್ಲಿ ಮರೆಯಾದೆ , ಯಾಕೆ ದೂರಾದೆ ?

ಉಸಿರು ನಿಂತಿದೆಯಷ್ಟೇ ... ಹೆಸರು ಅಜರಾಮರ !

( ಸಹೋದ್ಯೋಗಿ ತೀರ್ಥಪ್ರಸಾದನ ಸ್ನೇಹಿತ ರಘು (ಬಾಬು) ಡೆಂಗ್ಯು ಜ್ವರದಿಂದ ಅಕಾಲ ಮೃತ್ಯುವಿಗೆ ತುತ್ತಾದಾಗ ಅವರ ಕೋರಿಕೆಯಂತೆ ಬರೆದ ನುಡಿನಮನ )

Saturday, August 8, 2009

ಭಾಷಾ ಬೇದ ಮರೆತು ಅಭಿನಂದಿಸಬೇಕು : sarvagna statue in channai & tiruvallavar statue in bangalore

ಬೆಂಗಳೂರು : ಸುಮಾರು ೧೯ ವರ್ಷಗಳ ಹಿಂದಿನ ವಿವಾದವೊಂದು ಸೌಹಾರ್ದಯುತವಾಗಿ ಬಗೆಹರಿಯುತ್ತಿರುವ ಸಂದರ್ಭದಲ್ಲಿ ಅದನ್ನು ಸ್ವಾಗತಿಸುವುದು ನಮ್ಮ ಕರ್ತವ್ಯ. ಹೌದು ನಾನು ಹೇಳ ಹೊರಟಿರುವುದು ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಮತ್ತು ಚೆನ್ನೈನಲ್ಲಿ ಕನ್ನಡದ ಸಂತ ಕವಿ ಸರ್ವಜ್ಞ ಮೂರ್ತಿಯ ಪ್ರತಿಮೆ ಅನಾವರಣವಾಗುತ್ತಿರುವ ಕುರಿತು. ಇದು ಇಂದು ನಿನ್ನೆಯ ವಿವಾದದ ಯೋಜನೆಯಲ್ಲ ೧೯ ವರ್ಷಗಳ ಹಿಂದಿನದು. ಆದರೆ ಬಾಷ ವೈಷಮ್ಯವು ಇದಕ್ಕೆ ಅಡ್ಡಿಯಾಗಿ ಪ್ರತಿಮೆ ಅನಾವರಣ ಕಾರ್ಯ ನಡೆದಿರಲಿಲ್ಲ. ಸದ್ಯ ಉಭಯ ಸರ್ಕಾರಗಳು ಪರಸ್ಪರ ಮಾತುಕತೆ ನಡೆಸಿ ಪ್ರತಿಮೆ ಅನಾವರಣಕ್ಕೆ ಚಾಲನೆ ನೀಡಿವೆ. ಇದೊಂದು ಉತ್ತಮ ಹಾಗು ಆರೋಗ್ಯಕರ ಬೆಳವಣಿಗೆ. ನಾವು ರಾಮಾಯಣ, ಮಹಾ ಭಾರತ ದಂತಹ ಮಹಾನ್ ಕಾವ್ಯ ಗ್ರಂಥಗಳನ್ನು ಒಪ್ಪಿ ಸ್ವೀಕರಿಸಿದವರು. ಆ ಮಹಾನ್ ಕೃತಿಗಳು ಇರುವುದು ಸಂಸ್ಕೃತದಲ್ಲಿ ಅಂದ ಮಾತ್ರಕ್ಕೆ ಅವುಗಳನ್ನು ನಾವು ತಿರಸ್ಕರಿಸುವುದು ಸರಿಯೇ ? ಅವುಗಳ ಕರ್ತೃಗಳಾದ ವಾಲ್ಮೀಕಿ, ವ್ಯಾಸರಂತಹ ಸಂತ ಕವಿಗಳನ್ನು ನಾವು ಅಗೌರಿಸುವುದಕ್ಕಾ ಗುತ್ತದೆಯೇ ? ಇಲ್ಲ ತಾನೇ ಅಂದ ಮೇಲೆ ತಿರುವಳ್ಳವರ್ ರಂತಹ ಮಹಾನ್ ಸಂತ ಕವಿಯ ಪ್ರತಿಮೆ ನಮ್ಮ ನೆಲದಲ್ಲಿ ಸ್ಥಾಪಿಸುವುದನ್ನು ವಿರೋದಿಸುವುದು ನಮ್ಮ ಸಂಕುಚಿತತೆಯನ್ನು ತೋರ್ಪಡಿಸುವುದಿಲ್ಲವೇ ? ಕನ್ನಡಿಗರೆಂದರೆ ಉದಾರಿಗಳು, ವಿಶಾಲ ಹೃದಯ ಉಳ್ಳವರು ಹಾಗು ಶಾಂತಿ ಪ್ರಿಯರು ಎಂಬುದನ್ನು ನಾನು ಮತ್ತೆ ನೆನಪಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ. ಬೌಗೋಳಿಕವಾಗಿ ಯಾವ ಪ್ರದೇಶದಲ್ಲಿ ಹುಟ್ಟಿರುತ್ತಾರೋ ಆ ಭಾಷೆಯಲ್ಲಿ ತಮ್ಮ ಸಾಹಿತ್ಯ ಸೇವೆಯನ್ನು ಮಾಡುವುದು ಸಹಜ. ಅಂದ ಮಾತ್ರಕ್ಕೆ ಅವರ ತತ್ವ, ಆದರ್ಶ ಹಾಗು ಸಂದೇಶವನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ ನಾವು ಚಿಕ್ಕವರಗುವುದಿಲ್ಲವೇ ? ಕನ್ನಡದಲ್ಲಿಯೂ ಸಹ ಅದೆಷ್ಟೋ ಸಂತ ಕವಿಗಳು ಆಗಿ ಹೋಗಿದ್ದಾರೆ. ಜಗಜ್ಜ್ಯೋತಿ ಬಸವಾದಿ ಶರಣರು, ಪುರಂದರಾದಿ ದಾಸರು, ಅಷ್ಟೇ ಏಕೆ ಈ ಶತಮಾನ ಕಂಡ ರಾಷ್ಟ್ರಕವಿ ಕುವೆಂಪು ಅವರು ಸಹ ವಿಶ್ವ ಮಾನವ ಸಂದೇಶವನ್ನು ಸಾರಿದ್ದನ್ನು ನಾವು ಅರ್ಥ ಮಾಡಿ ಕೊಳ್ಳದಿದ್ದರೆ ನಾವು ಕೇವಲ ರಾಜ್ಯ ಮಾನವರಾಗಿ, ಜಿಲ್ಲಾ , ತಾಲೂಕು , ಊರಿನ, ಕೇರಿಯ, ಕೊನೆಗೆ ಕೇವಲ ಮನೆಗೆ ಮಾತ್ರ ಮಾನವರಾಗುತ್ತೇವೆ. ಆದ್ದರಿಂದ ಈ ಪ್ರಚಾರ ಪ್ರಿಯ ಪ್ರತಿಭಟನೆಗಳನ್ನು ಕೈ ಬಿಟ್ಟು ಉಭಯ ಸರ್ಕಾರಗಳ ನಿರ್ದಾರವನ್ನು ಸ್ವಾಗತಿಸಿ, ಅಬಿನಂದಿಸುವುದು ಸೂಕ್ತ.

ಇಲ್ಲಿ ಮತ್ತೊಂದು ವಿಷಯ ಸ್ಪಷ್ಟಪಡಿಸಬೇಕೆಂದರೆ ; ಕೇವಲ ತಿರುವಳ್ಳವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸುವ ನಿರ್ದಾರವನ್ನು ಕೈಗೊಂಡಿದ್ದರೆ ಕನ್ನಡ ಸಂಘಟನೆಗಳ ಪ್ರತಿಭಟನೆಯಲ್ಲಿ ಅರ್ಥವಿದೆ ಎಂದು ಕೊಳ್ಳಬಹುದಿತ್ತು. ಆದರೆ ಇದೇ ಸಂದರ್ಭದಲ್ಲಿ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಕನ್ನಡದ ಸಂತ ಕವಿ ಸರ್ವಜ್ಞ ಮೂರ್ತಿಯ ಪ್ರತಿಮೆ ಕೂಡ ಚೆನ್ನೈನಲ್ಲಿ ಅನಾವರಣಗೊಳ್ಳುತ್ತಿರುವುದರಿಂದ ನಮ್ಮ ಪ್ರತಿಭಟನೆಗೆ ಅರ್ಥವಿದೆಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ಎಲ್ಲರು ಹೀಗೆಯೇ ವರ್ತಿಸಿದ್ದರೆ ನಮ್ಮ ನೆಲದ ಮಹಾನ್ ದಾರ್ಶನಿಕ ಬಸವಣ್ಣ ಮತ್ತು ಕಿತ್ತೂರು ಚನ್ನಮ್ಮ ನವರ ಪ್ರತಿಮೆಗಳು ಸಂಸತ್ತಿನ ಆವರಣದಲ್ಲಿ ಪ್ರತಿಷ್ಠಾಪನೆಯಾಗುತ್ತಿರಲಿಲ್ಲ. ಇನ್ನೊಂದು ಸ್ವಾರಸ್ಯಕ ಅಂಶವೆಂದರೆ ಮೇಲೆ ಹೇಳಿದ ದಾರ್ಶನಿಕ ಬಸವಣ್ಣನವರ ವಚನವು ತಮಿಳು ಲಿಪಿಯಲ್ಲಿರುವ ತಾಳೆಗರಿಯೊಂದು ವಿದೇಶದ ಗ್ರಂಥಾಲಯದಲ್ಲಿ ದೊರೆತಿದೆ. ಇದನ್ನು ಪತ್ತೆ ಹಚ್ಚಿದ ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ತಮ್ಮ ಒಂದು ಪುಸ್ತಕದಲ್ಲಿ ಪ್ರಕಟಿಸಿದ್ದಾರೆ ಕೂಡ. ಒಮ್ಮೆ ನಮ್ಮ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಸತ್ತಿನಿಂದ ಹೊರಬರುತ್ತಿದ್ದಾಗ ನಮ್ಮ ಮಾಜಿ ಮುಖ್ಯಮಂತ್ರಿ ಕರ್ನಾಟಕ ರತ್ನ ದಿ. ಎಸ್ ನಿಜಲಿಂಗಪ್ಪ ನವರು ಎದುರಾದರಂತೆ. ಆಗ ಅಂಬೇಡ್ಕರ್ ರವರು ಕುಶೋಲೋಪರಿಯನ್ನು ವಿಚಾರಿಸಿ ನಂತರ ಹೇಳಿದರಂತೆ "ನಿಜಲಿಂಗಪ್ಪಾಜಿ ನಿಮ್ಮ ಬಸವಣ್ಣನನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಬೇಡಿ ಅವನನ್ನು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟಕ್ಕೆ ಹೊರಗಡೆ ಕಳುಹಿಸಿ ಕೊಡಿ" ಎಂದರಂತೆ ಇದರರ್ಥ ಯಾವುದೇ ಒಬ್ಬ ಸಂತ, ದಾರ್ಶನಿಕ, ಮಾನವತಾವಾದಿಯು ಜಾತಿ, ಭಾಷೆ, ವರ್ಣ ಎಲ್ಲವನ್ನು ಮೀರಿದ ವ್ಯಕ್ತಿ. ಆತ ಎಲ್ಲ ಕಾಲಕ್ಕೂ ಎಲ್ಲರಿಗೂ ಸಲ್ಲಬೇಕಾದ ವ್ಯಕ್ತಿ ಎಂಬುದಾಗಿದೆ.

ನಾವು ಕೇವಲ ಪ್ರತಿಷ್ಟೆಗಾಗಿ ಅನಾವರಣದ ವಿರುದ್ಧ ನೀಡುತ್ತಿರುವ ಕಾರಣಗಳು ನಿಜಕ್ಕೂ ಕ್ಷುಲ್ಲಕವೆನಿಸುತ್ತದೆ. ನಾವು ತಿರುವಳ್ಳವರ್ ಪ್ರತಿಮೆ ಸ್ತಾಪಿಸುತ್ತೇವೆಂದರೆ ಅದರರ್ಥ ತಮಿಳುನಾಡು ಸರ್ಕಾರ ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಸಮ್ಮತಿ ಇದೆ ಎಂದರ್ಥವಲ್ಲ. ಹೊಗೆನಕಲ್ ಯೋಜನೆ ಇರಬಹುದು, ಕಾವೇರಿ ನದಿ ನೀರಿನಂತಹ ಸೂಕ್ಷ್ಮ ವಿವಾದವೇ ಇರಬಹುದು ಅದೇ ಬೇರೆ ಇದೇ ಬೇರೆ ಅವುಗಳನ್ನು ಪ್ರತಿಮೆ ಅನಾವರಣಕ್ಕೆ ತಳುಕು ಹಾಕುವುದು ಅಸಮಂಜಸ. ನೆರೆ ಹೊರೆ ಎಂದ ಮೇಲೆ ಉಭಯ ರಾಜ್ಯಗಳ ನಡುವೆ ಏನಾದರೂ ಬಿನ್ನಭಿಪ್ರಾಯಗಳಿರುವುದು ಸಹಜ. ಇಂಥಹ ಸೌಹಾರ್ದಯುತ ನಿರ್ಧಾರವೊಂದರಿಂದ ಆ ಬಿನ್ನಭಿಪ್ರಾಯ ಸಂಪೂರ್ಣವಾಗಿ ನಿವಾರಣೆಯಾಗದಿದ್ದರೂ ಉಭಯ ರಾಜ್ಯಗಳ ನಡುವೆ ಒಂದು ರೀತಿ ಉತ್ತಮ ಸಂಬಂಧ ವೃದ್ದಿಗೆ ನಾಂದಿಯಾಗುವುದಂತು ಸತ್ಯ.

ಕೇವಲ ಸಭೆ ಸಮಾರಂಭ, ವೇದಿಕೆಗಳ ಮೇಲೆ ಹೇಳುವ; ಕನ್ನಡಿಗರು ಉದಾರಿಗಳು, ವಿಶಾಲ ಹೃದಯವುಳ್ಳವರು, ಶಾಂತಿ ಪ್ರಿಯರು ಎಂಬ ಮಾತನ್ನು ಸಾಬೀತು ಪಡಿಸುವುದಕ್ಕೆ ಇದೊಂದು ಅವಕಾಶವಾಗಲಿ. ಅನಾವರಣಗೊಂಡ ಪ್ರತಿಮೆಯು ಬಹು ಬೇಗ ಪೊಲೀಸ್ ರಕ್ಷಣಾ ರಹಿತವಾಗಿ ಕಂಗೊಳಿಸಲಿ.