ಬೆಂಗಳೂರು : ಸುಮಾರು ೧೯ ವರ್ಷಗಳ ಹಿಂದಿನ ವಿವಾದವೊಂದು ಸೌಹಾರ್ದಯುತವಾಗಿ ಬಗೆಹರಿಯುತ್ತಿರುವ ಸಂದರ್ಭದಲ್ಲಿ ಅದನ್ನು ಸ್ವಾಗತಿಸುವುದು ನಮ್ಮ ಕರ್ತವ್ಯ. ಹೌದು ನಾನು ಹೇಳ ಹೊರಟಿರುವುದು ಬೆಂಗಳೂರಿನಲ್ಲಿ ತಿರುವಳ್ಳವರ್ ಪ್ರತಿಮೆ ಮತ್ತು ಚೆನ್ನೈನಲ್ಲಿ ಕನ್ನಡದ ಸಂತ ಕವಿ ಸರ್ವಜ್ಞ ಮೂರ್ತಿಯ ಪ್ರತಿಮೆ ಅನಾವರಣವಾಗುತ್ತಿರುವ ಕುರಿತು. ಇದು ಇಂದು ನಿನ್ನೆಯ ವಿವಾದದ ಯೋಜನೆಯಲ್ಲ ೧೯ ವರ್ಷಗಳ ಹಿಂದಿನದು. ಆದರೆ ಬಾಷ ವೈಷಮ್ಯವು ಇದಕ್ಕೆ ಅಡ್ಡಿಯಾಗಿ ಪ್ರತಿಮೆ ಅನಾವರಣ ಕಾರ್ಯ ನಡೆದಿರಲಿಲ್ಲ. ಸದ್ಯ ಉಭಯ ಸರ್ಕಾರಗಳು ಪರಸ್ಪರ ಮಾತುಕತೆ ನಡೆಸಿ ಪ್ರತಿಮೆ ಅನಾವರಣಕ್ಕೆ ಚಾಲನೆ ನೀಡಿವೆ. ಇದೊಂದು ಉತ್ತಮ ಹಾಗು ಆರೋಗ್ಯಕರ ಬೆಳವಣಿಗೆ. ನಾವು ರಾಮಾಯಣ, ಮಹಾ ಭಾರತ ದಂತಹ ಮಹಾನ್ ಕಾವ್ಯ ಗ್ರಂಥಗಳನ್ನು ಒಪ್ಪಿ ಸ್ವೀಕರಿಸಿದವರು. ಆ ಮಹಾನ್ ಕೃತಿಗಳು ಇರುವುದು ಸಂಸ್ಕೃತದಲ್ಲಿ ಅಂದ ಮಾತ್ರಕ್ಕೆ ಅವುಗಳನ್ನು ನಾವು ತಿರಸ್ಕರಿಸುವುದು ಸರಿಯೇ ? ಅವುಗಳ ಕರ್ತೃಗಳಾದ ವಾಲ್ಮೀಕಿ, ವ್ಯಾಸರಂತಹ ಸಂತ ಕವಿಗಳನ್ನು ನಾವು ಅಗೌರಿಸುವುದಕ್ಕಾ ಗುತ್ತದೆಯೇ ? ಇಲ್ಲ ತಾನೇ ಅಂದ ಮೇಲೆ ತಿರುವಳ್ಳವರ್ ರಂತಹ ಮಹಾನ್ ಸಂತ ಕವಿಯ ಪ್ರತಿಮೆ ನಮ್ಮ ನೆಲದಲ್ಲಿ ಸ್ಥಾಪಿಸುವುದನ್ನು ವಿರೋದಿಸುವುದು ನಮ್ಮ ಸಂಕುಚಿತತೆಯನ್ನು ತೋರ್ಪಡಿಸುವುದಿಲ್ಲವೇ ? ಕನ್ನಡಿಗರೆಂದರೆ ಉದಾರಿಗಳು, ವಿಶಾಲ ಹೃದಯ ಉಳ್ಳವರು ಹಾಗು ಶಾಂತಿ ಪ್ರಿಯರು ಎಂಬುದನ್ನು ನಾನು ಮತ್ತೆ ನೆನಪಿಸುವ ಅಗತ್ಯವಿಲ್ಲ ಎಂದುಕೊಳ್ಳುತ್ತೇನೆ. ಬೌಗೋಳಿಕವಾಗಿ ಯಾವ ಪ್ರದೇಶದಲ್ಲಿ ಹುಟ್ಟಿರುತ್ತಾರೋ ಆ ಭಾಷೆಯಲ್ಲಿ ತಮ್ಮ ಸಾಹಿತ್ಯ ಸೇವೆಯನ್ನು ಮಾಡುವುದು ಸಹಜ. ಅಂದ ಮಾತ್ರಕ್ಕೆ ಅವರ ತತ್ವ, ಆದರ್ಶ ಹಾಗು ಸಂದೇಶವನ್ನು ನಾವು ಅರ್ಥ ಮಾಡಿಕೊಳ್ಳದಿದ್ದರೆ ನಾವು ಚಿಕ್ಕವರಗುವುದಿಲ್ಲವೇ ? ಕನ್ನಡದಲ್ಲಿಯೂ ಸಹ ಅದೆಷ್ಟೋ ಸಂತ ಕವಿಗಳು ಆಗಿ ಹೋಗಿದ್ದಾರೆ. ಜಗಜ್ಜ್ಯೋತಿ ಬಸವಾದಿ ಶರಣರು, ಪುರಂದರಾದಿ ದಾಸರು, ಅಷ್ಟೇ ಏಕೆ ಈ ಶತಮಾನ ಕಂಡ ರಾಷ್ಟ್ರಕವಿ ಕುವೆಂಪು ಅವರು ಸಹ ವಿಶ್ವ ಮಾನವ ಸಂದೇಶವನ್ನು ಸಾರಿದ್ದನ್ನು ನಾವು ಅರ್ಥ ಮಾಡಿ ಕೊಳ್ಳದಿದ್ದರೆ ನಾವು ಕೇವಲ ರಾಜ್ಯ ಮಾನವರಾಗಿ, ಜಿಲ್ಲಾ , ತಾಲೂಕು , ಊರಿನ, ಕೇರಿಯ, ಕೊನೆಗೆ ಕೇವಲ ಮನೆಗೆ ಮಾತ್ರ ಮಾನವರಾಗುತ್ತೇವೆ. ಆದ್ದರಿಂದ ಈ ಪ್ರಚಾರ ಪ್ರಿಯ ಪ್ರತಿಭಟನೆಗಳನ್ನು ಕೈ ಬಿಟ್ಟು ಉಭಯ ಸರ್ಕಾರಗಳ ನಿರ್ದಾರವನ್ನು ಸ್ವಾಗತಿಸಿ, ಅಬಿನಂದಿಸುವುದು ಸೂಕ್ತ.
ಇಲ್ಲಿ ಮತ್ತೊಂದು ವಿಷಯ ಸ್ಪಷ್ಟಪಡಿಸಬೇಕೆಂದರೆ ; ಕೇವಲ ತಿರುವಳ್ಳವರ್ ಪ್ರತಿಮೆಯನ್ನು ಬೆಂಗಳೂರಿನಲ್ಲಿ ಪ್ರತಿಷ್ಠಾಪಿಸುವ ನಿರ್ದಾರವನ್ನು ಕೈಗೊಂಡಿದ್ದರೆ ಕನ್ನಡ ಸಂಘಟನೆಗಳ ಪ್ರತಿಭಟನೆಯಲ್ಲಿ ಅರ್ಥವಿದೆ ಎಂದು ಕೊಳ್ಳಬಹುದಿತ್ತು. ಆದರೆ ಇದೇ ಸಂದರ್ಭದಲ್ಲಿ ಕೇವಲ ನಾಲ್ಕು ದಿನಗಳ ಅಂತರದಲ್ಲಿ ಕನ್ನಡದ ಸಂತ ಕವಿ ಸರ್ವಜ್ಞ ಮೂರ್ತಿಯ ಪ್ರತಿಮೆ ಕೂಡ ಚೆನ್ನೈನಲ್ಲಿ ಅನಾವರಣಗೊಳ್ಳುತ್ತಿರುವುದರಿಂದ ನಮ್ಮ ಪ್ರತಿಭಟನೆಗೆ ಅರ್ಥವಿದೆಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ಎಲ್ಲರು ಹೀಗೆಯೇ ವರ್ತಿಸಿದ್ದರೆ ನಮ್ಮ ನೆಲದ ಮಹಾನ್ ದಾರ್ಶನಿಕ ಬಸವಣ್ಣ ಮತ್ತು ಕಿತ್ತೂರು ಚನ್ನಮ್ಮ ನವರ ಪ್ರತಿಮೆಗಳು ಸಂಸತ್ತಿನ ಆವರಣದಲ್ಲಿ ಪ್ರತಿಷ್ಠಾಪನೆಯಾಗುತ್ತಿರಲಿಲ್ಲ. ಇನ್ನೊಂದು ಸ್ವಾರಸ್ಯಕ ಅಂಶವೆಂದರೆ ಮೇಲೆ ಹೇಳಿದ ದಾರ್ಶನಿಕ ಬಸವಣ್ಣನವರ ವಚನವು ತಮಿಳು ಲಿಪಿಯಲ್ಲಿರುವ ತಾಳೆಗರಿಯೊಂದು ವಿದೇಶದ ಗ್ರಂಥಾಲಯದಲ್ಲಿ ದೊರೆತಿದೆ. ಇದನ್ನು ಪತ್ತೆ ಹಚ್ಚಿದ ಸಿರಿಗೆರೆಯ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ತಮ್ಮ ಒಂದು ಪುಸ್ತಕದಲ್ಲಿ ಪ್ರಕಟಿಸಿದ್ದಾರೆ ಕೂಡ. ಒಮ್ಮೆ ನಮ್ಮ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂಸತ್ತಿನಿಂದ ಹೊರಬರುತ್ತಿದ್ದಾಗ ನಮ್ಮ ಮಾಜಿ ಮುಖ್ಯಮಂತ್ರಿ ಕರ್ನಾಟಕ ರತ್ನ ದಿ. ಎಸ್ ನಿಜಲಿಂಗಪ್ಪ ನವರು ಎದುರಾದರಂತೆ. ಆಗ ಅಂಬೇಡ್ಕರ್ ರವರು ಕುಶೋಲೋಪರಿಯನ್ನು ವಿಚಾರಿಸಿ ನಂತರ ಹೇಳಿದರಂತೆ "ನಿಜಲಿಂಗಪ್ಪಾಜಿ ನಿಮ್ಮ ಬಸವಣ್ಣನನ್ನು ಕೇವಲ ಕರ್ನಾಟಕಕ್ಕೆ ಸೀಮಿತಗೊಳಿಸಬೇಡಿ ಅವನನ್ನು ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟಕ್ಕೆ ಹೊರಗಡೆ ಕಳುಹಿಸಿ ಕೊಡಿ" ಎಂದರಂತೆ ಇದರರ್ಥ ಯಾವುದೇ ಒಬ್ಬ ಸಂತ, ದಾರ್ಶನಿಕ, ಮಾನವತಾವಾದಿಯು ಜಾತಿ, ಭಾಷೆ, ವರ್ಣ ಎಲ್ಲವನ್ನು ಮೀರಿದ ವ್ಯಕ್ತಿ. ಆತ ಎಲ್ಲ ಕಾಲಕ್ಕೂ ಎಲ್ಲರಿಗೂ ಸಲ್ಲಬೇಕಾದ ವ್ಯಕ್ತಿ ಎಂಬುದಾಗಿದೆ.
ನಾವು ಕೇವಲ ಪ್ರತಿಷ್ಟೆಗಾಗಿ ಅನಾವರಣದ ವಿರುದ್ಧ ನೀಡುತ್ತಿರುವ ಕಾರಣಗಳು ನಿಜಕ್ಕೂ ಕ್ಷುಲ್ಲಕವೆನಿಸುತ್ತದೆ. ನಾವು ತಿರುವಳ್ಳವರ್ ಪ್ರತಿಮೆ ಸ್ತಾಪಿಸುತ್ತೇವೆಂದರೆ ಅದರರ್ಥ ತಮಿಳುನಾಡು ಸರ್ಕಾರ ಕೈಗೊಳ್ಳುವ ಎಲ್ಲ ಯೋಜನೆಗಳಿಗೆ ಸಮ್ಮತಿ ಇದೆ ಎಂದರ್ಥವಲ್ಲ. ಹೊಗೆನಕಲ್ ಯೋಜನೆ ಇರಬಹುದು, ಕಾವೇರಿ ನದಿ ನೀರಿನಂತಹ ಸೂಕ್ಷ್ಮ ವಿವಾದವೇ ಇರಬಹುದು ಅದೇ ಬೇರೆ ಇದೇ ಬೇರೆ ಅವುಗಳನ್ನು ಪ್ರತಿಮೆ ಅನಾವರಣಕ್ಕೆ ತಳುಕು ಹಾಕುವುದು ಅಸಮಂಜಸ. ನೆರೆ ಹೊರೆ ಎಂದ ಮೇಲೆ ಉಭಯ ರಾಜ್ಯಗಳ ನಡುವೆ ಏನಾದರೂ ಬಿನ್ನಭಿಪ್ರಾಯಗಳಿರುವುದು ಸಹಜ. ಇಂಥಹ ಸೌಹಾರ್ದಯುತ ನಿರ್ಧಾರವೊಂದರಿಂದ ಆ ಬಿನ್ನಭಿಪ್ರಾಯ ಸಂಪೂರ್ಣವಾಗಿ ನಿವಾರಣೆಯಾಗದಿದ್ದರೂ ಉಭಯ ರಾಜ್ಯಗಳ ನಡುವೆ ಒಂದು ರೀತಿ ಉತ್ತಮ ಸಂಬಂಧ ವೃದ್ದಿಗೆ ನಾಂದಿಯಾಗುವುದಂತು ಸತ್ಯ.
ಕೇವಲ ಸಭೆ ಸಮಾರಂಭ, ವೇದಿಕೆಗಳ ಮೇಲೆ ಹೇಳುವ; ಕನ್ನಡಿಗರು ಉದಾರಿಗಳು, ವಿಶಾಲ ಹೃದಯವುಳ್ಳವರು, ಶಾಂತಿ ಪ್ರಿಯರು ಎಂಬ ಮಾತನ್ನು ಸಾಬೀತು ಪಡಿಸುವುದಕ್ಕೆ ಇದೊಂದು ಅವಕಾಶವಾಗಲಿ. ಅನಾವರಣಗೊಂಡ ಪ್ರತಿಮೆಯು ಬಹು ಬೇಗ ಪೊಲೀಸ್ ರಕ್ಷಣಾ ರಹಿತವಾಗಿ ಕಂಗೊಳಿಸಲಿ.